ಏಡಿಗಂತಿಜನಕ ರಾಸಾಯನಿಕಗಳು
 
ಜೀವಿಯ ದೇಹದಲ್ಲಿ ಏಡಿಗಂತಿಯನ್ನು (ಕ್ಯಾನ್ಸರ್) ಉಂಟುಮಾಡಬಲ್ಲ ರಾಸಾಯನಿಕಗಳು (ಕಾರ್ಸಿನ್ರೆಜೇನಿಕ್ ಕೆಮಿಕಲ್ಸ್). ದೇಹದ ಸಹಜ ಕೋಶಗಳಲ್ಲಿ ವಿವಿಧ ಬಗೆಯ ರಾಸಾಯನಿಕಗಳು ವಿಷಮ ಬದಲಾವಣೆಗಳನ್ನು ಉಂಟುಮಾಡಬಲ್ಲವು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಬಗೆಯ ಏಡಿಗಂತಿಯ ಮಾರ್ಪಾಡುಗಳನ್ನು ಉಂಟುಮಾಡಬಲ್ಲ ರಾಸಾಯನಿಕಗಳೇ ಏಡಿಗಂತಿಜನಕ ರಾಸಾಯನಿಕಗಳು. ಏಡಿಗಂತಿ ಬಹುಕೋಶ ಜೀವಿಗಳಿಗೆ (ಮಲ್ಟಿಸೆಲ್ಲುಲರ್ ಅಗ್ರ್ಯಾನಿಸಮ್ಸ್) ಬರುವ ಒಂದು ಕಾಯಿಲೆ. ಜೀವಿಯ ಸಹಜ ಕೋಶಗಳೇ ಅವಾಸ್ತವಿಕರೂಪ ತಳೆದು ಅನಿಯಂತ್ರಿತ ವೃದ್ಧಿಹೊಂದುವಿಕೆ ಮತ್ತು ಜೀವಿಯಲ್ಲಿ ಹರಡುವಿಕೆ-ಇವು ಈ ಕಾಯಿಲೆಯ ಲಕ್ಷಣ. ಏಡಿಗಂತಿ ಒಂದು ಕಾಯಿಲೆ ಅಲ್ಲ; ಹಲವಾರು ಕಾರ್ಯಕಾರಣ ಸಂಬಂಧಗಳ (ಏಟಿಯಾಲಜಿ) ಪರಿಣಾಮವಾಗಿ ಉಂಟಾಗುವ ಹಲವಾರು ಕಾಯಿಲೆಗಳ ಒಂದು ಗುಂಪೇ ಆಗಿದೆ. ಆದ್ದರಿಂದ ಏಡಿಗಂತಿಯ ಬೆಳವಣಿಗೆಗೆ ಯಾವುದೇ ಒಂದು ವಿಶಿಷ್ಟ ಕಾರ್ಯಕಾರಣ ಸಂಬಂಧವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಇದುವರೆಗಿನ ಅನುಭವದ ಪ್ರಕಾರ ಏಡಿಗಂತಿಯ ಹಲವಾರು ನಮೂನೆಗಳಲ್ಲಿ ಬಹುಸಂಖ್ಯೆಯ ಕಾರ್ಯಕಾರಣ ಸಂಬಂಧಗಳು ಅಡಕವಾಗಿವೆಯೆಂದೂ ಇವುಗಳಲ್ಲಿ ಕೆಲವು ಇತರವುಗಳಿಗಿಂತ ಪ್ರಧಾನವಾಗಿವೆಯೆಂದೂ ತಿಳಿದಿವೆ. ಇಂಥವುಗಳಲ್ಲಿ ರಾಸಾಯನಿಕಗಳಿಂದ ಉತ್ಪನ್ನವಾಗುವ ಏಡಿಗಂತಿಗಳಿಗೆ (ಕಾರ್ಸಿನೋಜೆನಿಸಿಸ್) ಗಮನಾರ್ಹ ಸ್ಥಾನವಿದೆ.
ರಾಸಾಯನಿಕಜನ್ಯ ಏಡಿಗಂತಿಯನ್ನು ಮೊದಲು ಸೂಚಿಸಿದಾತ ಪರ್ಸಿವಾಲ್ ಪಾಟ್ (1775). ಹೊಗೆಕೊಳವೆಗಳಲ್ಲಿ ಕಟ್ಟಿಕೊಂಡಿದ್ದ ಕಿಟ್ಟ ತೆಗೆದು ಚೊಕ್ಕಪಡಿಸುತ್ತಿದ್ದ ಹುಡುಗರಲ್ಲಿ ತರಡಿನ ಏಡಿಗಂತಿ ಸಾಮಾನ್ಯವಾಗಿ ಏಳಲು ಹೊಗೆಕರಿ ಕಾರಣವಿರುವುದೆಂದು ಈತ ಬಗೆದ. ಕಾರ್ಖಾನೆಗಳ ಕೆಲಸಗಾರರಲ್ಲಿ ಕಂಡುಬರುವ ಚರ್ಮದ ಏಡಿಗಂತಿಯ (ಇಂಡಸ್ಟ್ರಿಯಲ್ ಸ್ಕೀನ್ ಕ್ಯಾನ್ಸರ್) ಕಾರಣ ಅಲ್ಲಿ ಚರ್ಮಕ್ಕೆ ತಾರೆಣ್ಣೆಯೊಡನೆ ಒದಗುವ ಸಂಪರ್ಕ ಎಂದು ಒಂದು ಶತಮಾನದ ತರುವಾಯ ವಾನ್ ವಾಲ್ಕ್ ಮ್ಯಾನ್ ಸೂಚಿಸಿದ (1875). ಶೇಲ್ ಎಣ್ಣೆಯ ಪರಿಣಾಮವಾಗಿ ಉಂಟಾಗುವ ಪ್ಯಾರಾಫಿನ್ ಏಡಿಗಂತಿಯನ್ನು (ಒಂದು ವರ್ಷದ ಅನಂತರ) ಶೋಧಿಸಿದಾತ ಬೆಲ್, ಕೈಗಾರಿಕೆಗಳು ಸರ್ವವ್ಯಾಪ್ತಿಯಾಗಿ ಬೆಳೆದಂತೆ ಖನಿಜದ ಎಣ್ಣೆ, ತಾರೆಣ್ಣೆ, ಹೊಗೆಕರಿ ಇವನ್ನೆಲ್ಲ ತಾಗಿಸಿಕೊಳ್ಳುವ ಕೆಲಸಗಾರರಲ್ಲಿ ಆ ಪರಿಣಾಮವಾಗಿ ಎದ್ದ ಗಂತಿಗಳು ಗಮನಕ್ಕೆ ಬಂದುವು.
ರಾಸಾಯನಿಕಗಳು ಏಡಿಗಂತಿಜನಕಗಳಾಗಬಹುದೆಂಬುದನ್ನು ಈ ಅನುಭವಗಳು ಸೂಚಿಸಿದುವು. ಆದರೆ ಈ ಭಾವನೆ ಖಚಿತವಾದದ್ದು ಯೋಮಗಾವ ಮತ್ತು ಇಚಿಕಾವ ಎಂಬ ವಿಜ್ಞಾನಿಗಳ 1915ರಲ್ಲಿ ಮಾಡಿದ ಸುಪ್ರಸಿದ್ಧ ಪರಿಶೋಧನೆಯಿಂದ-ಅವರು ಮೊಲಗಳ ಕಿವಿಗಳಿಗೆ ತಾರೆಣ್ಣೆ ಲೇಪಿಸಿ ಅಲ್ಲಿ ವಿಷಮಗಂತಿಗಳು (ಮ್ಯಾಲಿU್ವ್ನಂಟ್ ಟ್ಯೂಮಸ್ ್) ಏಳುವುದನ್ನು ಗಮನಿಸಿದರು. ಮುಂದೆ 1918ರಲ್ಲಿ ಇದೇ ತೆರನ ಪ್ರಯೋಗದಿಂದ ಚಿಟ್ಟಿಲಿಗಳ (ಮೈಸ್) ಚರ್ಮದ ಮೇಲೆ ಗಂತಿಗಳನ್ನು ಉಂಟು ಮಾಡುವುದು ಸುಟ್ಲೂಯಿಗೆ ಸಾಧ್ಯವಾಯಿತು. ಇಂಥ ಪ್ರಯೋಗಗಳ ಪರಿಣಾಮವಾಗಿ ತಾರೆಣ್ಣೆ, ಖನಿಜದ ಎಣ್ಣೆ ಮುಂತಾದವುಗಳಲ್ಲಿ ಇರುವ ಏಡಿಗಂತಿಜನಕ ರಾಸಾಯನಿಕಗಳನ್ನು ಬೇರ್ಪಡಿಸಿ ಅಭ್ಯಸಿಸಲು ಹೊಸ ಹುರುಪು ಬಂತು.
1935ರಲ್ಲಿ ಕುಕ್, ಕೆನ್ನವೇ ಮತ್ತು ಹೀಜರ್ ಎಂಬುವರು ತಾರೆಣ್ಣೆಯಲ್ಲಿರುವ ಏಡಿಗಂತಿಜನಕ ಹೈಡ್ರೊಕಾರ್ಬನ್ನನ್ನು ಪ್ರತ್ಯೇಕಿಸಿ ಅದು 3-4 ಬೆಂeóÉೂಪೈರೀನ್ ಎಂದು ತೋರಿಸಿಕೊಟ್ಟರು. ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೊಕಾರ್ಬನ್ನುಗಳ ಗುಂಪಿಗೆ ಬೆಂeóÉೂೀಪೈರೀನ್ ಸೇರಿರುವುದರಿಂದ ಇಡೀ ಗುಂಪಿನ ವಿವಿಧ ಹೈಡ್ರೊಕಾರ್ಬನ್ನುಗಳ ಸಂಶ್ಲೇಷಣೆ ಹಾಗೂ ಪರೀಕ್ಷೆಗಳನ್ನು ನಡೆಸಲಾಯಿತು.

ಮಾನವನಿಗೆ ಆತನ ವೃತ್ತಿಗಳ ಕಾರಣವಾಗಿ ಉಂಟಾಗುವ ಅಪಾಯಗಳನ್ನು ರಾಸಾಯನಿಕ ಏಡಿಗಂತಿಜನಕಗಳ ಪರಿಶೀಲನೆಯಿಂದ ಗುರುತಿಸಲು ಸಾಧ್ಯವಾಗಿದೆ. ಮಾನವನ ಪರಿಸರದಲ್ಲಿ ಎಡಿಗಂತಿಜನಕಗಳಾಗಿ ರಾಸಾಯನಿಗಳು ವ್ಯಾಪಿಸಿರಬಹುದಾದುದರ ಪ್ರಾಮುಖ್ಯ ಈಗ ಮನದಟ್ಟಾಗಿದೆ. ಬಾಹ್ಯ ಪರಿಸರದಲ್ಲಿ ಮಾತ್ರವಲ್ಲ, ಆಹಾರಪದಾರ್ಥಗಳಲ್ಲಿ ಮತ್ತು ಅವುಗಳೊಡನೆ ಬೆರೆಯುವ ಇತರ ಪದಾರ್ಥಗಳಲ್ಲಿ ಸಹ ಏಡಿಗಂತಿಯ ಜನಿಸುವಿಕೆಯಲ್ಲಿ ಮುಖ್ಯ ಪಾತ್ರವಹಿಸಬಹುದಾದ ತೀಕ್ಷ್ಣಸಂಯುಕ್ತಗಳು ಇರುತ್ತವೆ. ಈ ಸಂಗತಿ ಈಚೀಚೆಗೆ ಹೆಚ್ಚುಹೆಚ್ಚಾಗಿ ಖಚಿತವಾಗುತ್ತಿದೆ.
ರಾಸಾಯನಿಕ ಏಡಿಗಂತಿಜನಕಗಳನ್ನು ಪರಿಶೋಧಿಸಿದ್ದು ಮತ್ತು ಪರಿಶೋಧಿಸುತ್ತಿರುವುದು ಹೇಗೆ ಎಂಬುದನ್ನು ತಿಳಿಯುವುದು ಕುತೂಹಲಪ್ರದವಾಗಿದೆ. ಪರ್ಸಿವಾಲ್ ಪಾಟನ ಕಾಲದಲ್ಲಿ ಇದ್ದಹಾಗೆಯೇ ಇಂದು ಸಹ ಪರಿಸರದ ಪ್ರಭಾವದಿಂದ ಉಂಟಾಗುವ ಎಡಿಗಂತಿಗಳ ಮೇಲಿನ ಸಂಶೋಧನೆಗಳೇ ಗಮನ ಸೆಳೆಯುತ್ತಿವೆ. ವೃತ್ತಿಜನ್ಯ ಏಡಿಗಂತಿಯ ಅಭ್ಯಾಸದಿಂದ ಪಾಲಿಸೈಕ್ಲಿಕ್ ಹೈಡ್ರೊಕಾರ್ಬನ್ನುಗಳ ಏಡಿಗಂತಿಜನಕಗುಣಗಳು ತಿಳಿದುವು. ಇದರ ಪ್ರಕಾರ ಆರೋಮ್ಯಾಟಿಕ್ ಆಮೈನುಗಳು ಮೂತ್ರಕೋಶದ ಏಡಿಗಂತಿಜನಕಗಳು; ನಿಕ್ಕಲ್ ಲೋಹ ಮೂಗಿನ ಏಡಿಗಂತಿಜನಕವಾದರೆ ಲೋಹಗಳು ಸಾಮಾನ್ಯವಾಗಿ ಪುಪ್ಪುಸದ ಏಡಿಗಂತಿಜನಕಗಳು; ಟ್ಯಾನಿಕ್ ಆಮ್ಲ, ಆಲ್ಕಲಾಯ್ಡುಗಳು, ಕ್ಲೋರೋಕಾರ್ಬನುಗಳು, ಡೈ ಆಲ್ಕೈಲ್ ಅರಿಶಿನಾರಿಗೆಯನ್ನೂ (ಲಿವರ್ ಸಿರೋಸಿಸ್) ಉಂಟುಮಾಡುವುವು; ರೇಡಿಯೋ ರಾಸಾಯನಿಕಗಳು ಮೂಳೆಯ ಲ್ಯುಕೇಮಿಯಾ ಮತ್ತು ಮೂಳೆಯ ಏಡಿಗಂತಿಜನಕಗಳು.

ದೇಹದಲ್ಲಿ ಸಾಮಾನ್ಯವಾಗಿ ಇರುವ ಸಂಯುಕ್ತಗಳ ಅಭ್ಯಾಸದ ಪರಿಣಾಮವಾಗಿ ದೇಹದ ಒಳಗೆ ಉತ್ಪನ್ನವಾಗುವ (ಅಂತರ್ಜಾತ-ಎಂಡೋಜಿನಸ್) ರಾಸಾಯನಿಕ ಏಡಿಗಂತಿಜನಕಗಳನ್ನು ಕುರಿತು ಒಳನೋಟ ಲಭಿಸಿದೆ. ಅಂತಃಸ್ರವೀಗ್ರಂಥಿಗಳ (ಎಂಡೋಕ್ರೈನ್ ಗ್ಲ್ಯಾಂಡ್ಸ್) ಬೆಳವಣಿಗೆ ಹಾಗೂ ವಿಶಿಷ್ಟ ರಚನೆಯಲ್ಲಿ ಪೋಷಕವಾಗಿರುವ ಮತ್ತು ಮೊಲೆ ಹಾಗೂ ಗರ್ಭಕೋಶದ ಮೇಲೆ ಪ್ರಭಾವಬೀರುವ ಚೋದನಿಕಗಳು (ಹಾರ್ಮೋನ್ಸ್) ಇವುಗಳಲ್ಲಿ ಪ್ರಧಾನವಾದವು. ದೇಹದಲ್ಲಿ ಇರುವ ಸಮಸ್ಥಿತಿಯನ್ನು (ಹೋಮಿಯೊಸ್ಟ್ಯಾಟಿಕ್ ಬ್ಯಾಲೆನ್ಸ್) ಅಧಿಕ ಚೋದನಿಕಗಳು ವ್ಯತ್ಯಾಸಗೊಳಿಸಿದರೆ ಚೋದನಿಕಗಳಿಗೆ ಪ್ರತಿಕ್ರಿಯೆ ತೋರಿಸುವ ಅಂಗಗಳಲ್ಲಿ (ರೆಸ್ಪಾನ್ ಸಿವ್ ಆರ್ಗನ್ಸ್) ಏಡಿಗಂತಿ ಉಂಟಾಗುವುದು.
ರೋಗ ಚಿಕೆತ್ಸೆಗಾಗಿ ಬಳಸುವ ಮದ್ದುಗಳ ಪರಿಣಾಮಗಳ ಅಭ್ಯಾಸದಿಂದ ರಾಸಾಯನಿಕಗಳ ಏಡಿಗಂತಿಜನಕ ಗುಣಗಳನ್ನು ತಿಳಿಯಲಾಗಿದೆ. ಗಾಯಗಳಿಗೆ ಲೇಪಿಸುವ ಸ್ಕಾರ್ಲೆಟ್ ರೆಡ್ ಎಂಬ ರಾಸಾಯನಿಕದ ಪರಿಣಾಮಗಳ ಪರಿಶೀಲನೆಯಿಂದ ಏಡಿಗಂತಿಜನಕ ಆಜೋಡೈ, ಆರ್ಥೋ ಅಮೈನೋ, ಅಜೋ ಟಾಲೀನ್ ಇವುಗಳ ಶೋಧನೆ ಆಯಿತು. ಏಡಿಗಂತಿ ರೋಗ ಚಿಕಿತ್ಸೆಯಿಂದ ನೈಟ್ರೊಜನ್ ಮಸರ್ಡುಗಳ ಏಡಿಗಂತಿಜನಕ ಗುಣ ಗೊತ್ತಾಯಿತು.
ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಪುಪ್ಪುಸದ ಏಡಿಗಂತಿಯ ವ್ಯಾಪ್ತಿಯ ಅಧಿಕ್ಯವನ್ನು ಏಡಿಗಂತಿಯ ಸಾಂಕ್ರಾಮಿಕ ಶಾಸ್ತ್ರ (ಎಪಿಡೆಮಿಯಾಲಜಿ) ವಿಶದೀಕರಿಸಿತು. ಇದರ ಒಂದು ಕಾರ್ಯಕಾರಣ ಸಂಬಂಧ ಸಿಗರೇಟ್ ಸೇವನೆಯಿರಬಹುದೇ ಎಂಬ ಶೋಧನೆಗೆ ಇದು ಎಡೆಮಾಡಿಕೊಟ್ಟಿತು. ಸಿಗರೇಟ್ ಹೊಗೆಯನ್ನು ವಿಶ್ಲೇಷಿಸಿ ತಂಬಾಕಿನ ಕೆಲವು ಏಡಿಗಂತಿಜನಕ ರಾಸಾಯನಿಕಗಳನ್ನು ಪ್ರತ್ಯೇಕಿಸಲಾಗಿದೆ. ಇಂಥ ಕೆಲಸದಲ್ಲಿ ಇರುವ ಆಸಕ್ತಿ ಎರಡು ಬಗೆಯದು. ರಾಸಾಯನಿಕ ಏಡಿಗಂತಿಜನಕಗಳ ಶೋಧನೆ ಹಾಗೂ ಸಮರ್ಪಕ ರಕ್ಷಣೆಯ ಏರ್ಪಾಡು, ಒಂದು, ಏಡಿಗಂತಿಯ ಅಭಿವೃದ್ಧಿ ಬೇರೆ ಬೇರೆ ರಾಸಾಯನಿಕಗಳ ಕಾರಣವಾಗಿ ಹೇಗೆ ಆಗುತ್ತದೆ ಎಂದು ತಿಳಿಯುವುದು, ಇನ್ನೊಂದು.
ಕೆಲವು ಏಡಿಗಂತಿಜನಕ ವಸ್ತುಗಳು, ರಾಸಾಯನಿಕಗಳು ಮತ್ತು ಗಂತಿಯ ಬೆಳೆವಣಿಗೆಯ ಸ್ವರೂಪವನ್ನು ಮುಂದೆ ಪಟ್ಟಿಮಾಡಿದೆ.

1. ಕಲ್ನಾರು : ಪುಪ್ಪುಸದ ಏಡಿಗಂತಿಗೆ ಸಂಬಂಧಿಸಿದೆ. ಕಲ್ನಾರಿನಲ್ಲಿರುವ ಸಿಲಿಕ ಕಾರಣವಾಗಿರಬಹುದೆಂದು ಶಂಕೆ; ಇದನ್ನು ಪ್ರಾಯೋಗಿಕವಾಗಿ ಖಚಿತಪಡಿಸಿಲ್ಲ.

2. ಕ್ರೋಮಿಯಂ : ಬಣ್ಣದ ವಸ್ತುಗಳ ತಯಾರಿಕೆಯಲ್ಲೂ ಸತು ಮತ್ತು ಸೀಸದ ಕ್ರೋಮೆಟುಗಳ ತಯಾರಿಕೆಯಲ್ಲೂ ಕೆಲಸ ಮಾಡುವವರಿಗೆ ಪುಪ್ಪುಸದ ಏಡಿಗಂತಿ ಬರಬಹುದು.
ನಿಕ್ಕಲ್ : ಉಸಿರಾಟದ ಸಾಗುನಾಳದ ಏಡಿಗಂತಿ ತಲೆದೋರಬಹುದು.

3. ಕಪ್ಪುರಾಳ (ಪಿಚ್), ತಾರೆಣ್ಣೆ, ಹೊಗೆಕರಿ (ಸೂಟ್) ಮತ್ತು ಖನಿಜದ ಎಣ್ಣೆ : ಇವು ಕಾರ್ಖಾನೆಗಳಲ್ಲಿ ಕೈಗಾರಿಕೆಗಳಲ್ಲಿ ಚರ್ಮದ ಏಡಿಗಂತಿಜನಕಗಳಾಗಿವೆ. ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೊಕಾರ್ಬನ್ನುಗಳು ಕಪ್ಪುರಾಳ, ತಾರೆಣ್ಣೆ ಮತ್ತು ಹೊಗೆಕರಿಯಲ್ಲಿರುವ ಏಡಿಗಂತಿಜನಕಗಳು. ಖನಿಜದ ಎಣ್ಣೆಯಲ್ಲಿರುವ ರಾಸಾಯನಿಕ ಯಾವುದೆಂದು ಇನ್ನೂ ತಿಳಿದಿಲ್ಲ.

4. ಆರೋಮ್ಯಾಟಿಕ್ ಆಮೈನುಗಳು : ಇವನ್ನು ಸಂಶ್ಲೇಷಿತ ವರ್ಣದ್ರವ್ಯಗಳ ತಯಾರಿಕೆಯಲ್ಲೂ ರಬ್ಬರ್ ಉದ್ಯಮದಲ್ಲೂ ಉಪಯೋಗಿಸುತ್ತಾರೆ; ಇವು ಮೂತ್ರಕೋಶದ ಏಡಿಗಂತಿಜನಕಗಳು (ಬೆಂಜಿಡೀನ್, ನ್ಯಾಫ್ತಿಲಮೈನ್).

5. ತಂಬಾಕು : ತಂಬಾಕು ಸೇವನೆಯಿಂದ ಪುಪ್ಪುಸದ್ದೇ ಅಲ್ಲದೆ ಬಾಯಿ, ಧ್ವನಿನಾಳ, ಅನ್ನನಾಳ, ಮೂತ್ರಕೋಶಗಳಲ್ಲೂ ಏಡಿಗಂತಿಗಳಾಗಿವೆ. ಪಾಲಿಸೈಕ್ಲಿಕ್ ಆರೋಮ್ಯಾಟಿಕ್  ಹೈಡ್ರೊಕಾರ್ಬನ್ನುಗಳು ಮತ್ತು ನ್ಯಾಫ್ತಿಲಮೈನುಗಳಂಥ ಏಡಿಗಂತಿಜನಕ ರಾಸಾಯನಿಕಗಳನ್ನು ತಂಬಾಕುವಿನಿಂದ ಪ್ರತ್ಯೇಕಿಸಲಾಗಿದೆ.

6. ಬಹ್ವಂಗಗಳು (ಪಾಲಿಮರ್ಸ್) ಮತ್ತು ಪ್ಲಾಸ್ಟಿಕ್ಕುಗಳು : ಇಲಿಗಳಲ್ಲಿ ಬೇಕಲೈಟಿನ ಬಿಲ್ಲೆಗಳಿಂದ ತಂತು ಸ್ನಾಯುಗಂತಿಯೂ (ಫೈಬ್ರೊಸಾರ್ಕೋಮಾ) ಸೆಲ್ಲೋಫೇನಿನ ಬಿಲ್ಲೆಯಿಂದ ಮೂತ್ರಪಿಂಡದ ಸುತ್ತಲಿನ ಸ್ನಾಯುಗಂತಿಯೂ ಎದ್ದಿವೆ.  ಈ ಬೃಹದಣುಕಾರಕಗಳಿಂದ (ಮ್ಯಾಕ್ರೋಮೊಲೆಕ್ಯುಲರ್ ಏಜೆಂಟ್ಸ್) ಉಂಟಾಗುವ ಏಡಿಗಂತಿಯ ಕಾರಣವಿನ್ನೂ ತಿಳಿದಿಲ್ಲ.

7. ಆರ್ಸೆನಿಕ್ : ಕುರಿಗುಣಿಮದ್ದು (ಷೀಪ್ ಡಿಪ್), ವರ್ಣದ್ರವ್ಯಗಳು ಇವುಗಳ ತಯಾರಿಕೆಯಲ್ಲಿ ವಿಪುಲವಾಗಿ ಬಳಸುವ ಆರ್ಸೆನಿಕ್ ಈ ಖನಿಜದ ಗಣಿ ಕೆಲಸಗಾರರಲ್ಲಿ ಪುಪ್ಪುಸದ ಏಡಿಗಂತಿಯನ್ನು ಉಂಟುಮಾಡುವುದೆಂದು ಗೊತ್ತಾಗಿದೆ. ಕೀಟನಾಶಕ ಆರ್ಸೆನಿಕ್ ತಯಾರಿಕರಿಗೆ ಚರ್ಮದ ಏಡಿಗಂತಿ   ಆಗುವುದೂ ತಿಳಿದಿದೆ.

8. ಬೂಷ್ಟಿನ ಜೀವವಿಷಗಳು (ಫಂಗಲ್ ಟಾಕ್ಸಿನ್ಸ್) : ಆಹಾರಧಾನ್ಯಗಳು ಮತ್ತು ಇತರ ಆಹಾರ ಪದಾರ್ಥಗಳ ಮೇಲೆ ಬೆಳೆಯುವ ಬೂಷ್ಟುಗಳು ಬಿಡುವ ಜೀವವಿಷಪದಾರ್ಥಗಳನ್ನು ತಿನ್ನುವುದರಿಂದ ಏಡಿಗಂತಿ ಬರುವುದೆಂದು ಗೊತ್ತಾಗಿದೆ. ಈ ಶೋಧನೆ ರಾಸಾಯನಿಕ ಏಡಿಗಂತಿಜನಕಗಳ ಪ್ರಪಂಚದಲ್ಲಿ ಒಂದು ಹೊಸ ವಲಯವನ್ನೇ ಅನಾವರಣ ಮಾಡಿದೆ. ಅಸ್ಪರ್ಗಿಲ್ಲಸ್ ಫ್ಲೇವಸ್ ಎಂಬ ಹೆಸರಿನ ಬೂಷ್ಟು ಬೆರೆತಿದ್ದ ಕಡಲೆಕಾಯಿ ಹಿಂಡಿ ಆಹಾರ ಸೇವಿಸಿದ ಕೋಳಿಗಳಲ್ಲಿ ಒಂದು ವಿಚಿತ್ರ ವ್ಯಾಧಿ ತಲೆದೋರಿತು. ಇದರ ಶೋಧನೆಯ ಪರಿಣಾಮವಾಗಿ ಅಫ್ಲಟಾಕ್ಸಿನ್ ಎಂಬ ಹೊಸತೊಂದು ಏಡಿಗಂತಿಜನಕ ರಾಸಾಯನಿಕವನ್ನು ಪ್ರತ್ಯೇಕಿಸುವುದು ಸಾಧ್ಯವಾಯಿತು. ಹಳದಿ ಬಣ್ಣಕ್ಕೆ ತಿರುಗಿದಂಥ ಅಕ್ಕಿ ಮತ್ತು ಇಂಥ ಇತರ ಆಹಾರ ಪದಾರ್ಥಗಳ ಸೇವನೆಯಿಂದ ಈಲಿಯಲ್ಲಿ ಗಂತಿಗಳು ಏಳಬಹುದು.

ರಾಸಾಯನಿಕ ಏಡಿಗಂತಿಜನಕಗಳು ಮತ್ತು ಅವುಗಳ ವರ್ತನೆಯ ವಿಧಾನ : ರಾಸಾಯನಿಕ ಏಡಿಗಂತಿಜನಕಗಳು ಏಡಿಗಂತಿಯನ್ನು ಪ್ರಚೋದಿಸುವ ಜೀವರಾಸಾಯನಿಕ ಕ್ರಿಯಾತಂತ್ರವೇನೆಂದು ಇನ್ನೂ ತಿಳಿದಿಲ್ಲ. ಗಂತಿಗಳನ್ನು ಉಂಟು ಮಾಡುವ ರಾಸಾಯನಿಕ ಕಾರಕಗಳು ಬಲು ವಿಧದವು. ಈ ವೈವಿಧ್ಯದ ಪರಿಣಾಮವಾಗಿ ಎಲ್ಲ ರಾಸಾಯನಿಕಗಳಿಗೂ ಅನ್ವಯಿಸುವಂತೆ ಅವುಗಳ ಏಡಿಗಂತಿಜನಕ ಕ್ರಿಯೆಯನ್ನು ನಿಖರವಾಗಿ ಸೂಚಿಸಬಲ್ಲ ಪರಮಾಣುಸೂತ್ರಗಳನ್ನು ವ್ಯಾಖ್ಯಿಸುವುದು ಸಾಧ್ಯವಾಗುವುದಿಲ್ಲ.
ಇಂದಿನ ಆಧಾರಭಾವನೆಯನ್ನು ಎರಡು ಪಂಗಡಗಳಾಗಿ ವಿಂಗಡಿಸಬಹುದು : 1 ಕೋಶದ ಮೇಲ್ಮೈ ಮೇಲೆ ರಾಸಾಯನಿಕ ವರ್ತಿಸುತ್ತದೆ, ಮತ್ತು 2 ವಂಶವಾಹಿಯಾಗಿ (ಜೆನೆಟಿಕಲಿ) ಬಲು ಮುಖ್ಯವಾಗಿರುವ ನ್ಯೂಕ್ಲೆಯಿಕ್ ಆಮ್ಲಗಳೊಡನೆ ಈ ರಾಸಾಯನಿಕಗಳು ನೇರವಾಗಿ ಅಂತರಕ್ರಿಯೆ ಎಸಗುತ್ತವೆ. ಏಡಿಗಂತಿಜನಕಗಳ ಕ್ರಿಯೆಯ ಹಿನ್ನೆಲೆಯಲ್ಲಿರುವ ನಿಖರವಾದ ರಾಸಾಯನಿಕ ಕ್ರಿಯಾತಂತ್ರ ಏನೇ ಇರಲಿ, ಅವು ವಂಶವಾಹೀ ವಸ್ತುವಿನೊಡನೆ ಅಥವಾ ಅದರ ಮುನ್ಸೂಚಕಗಳೊಡನೆ (ಪ್ರೀಕರ್ಸರ್ಸ್) ಸಂಯೋಜಿಸುವುದರ ಪ್ರಾಮುಖ್ಯವನ್ನು ಕುರಿತು ಎಳ್ಳಷ್ಟೂ ಸಂಶಯವಿಲ್ಲ. ಈ ಸಂಯೋಜನೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಜ ಬೆಳವಣಿಗೆಯನ್ನು ನಿಯಂತ್ರಿಸಲು ಅತ್ಯಾವಶ್ಯಕಗಳಾದ ಕೆಲವು ಮುಖ್ಯ ಪ್ರೋಟಿನುಗಳನ್ನು ನಿರ್ಮೂಲಗೊಳಿಸಬಹುದು.

ಇಂಥ ಸಂಯೋಜನೆಯಿಂದ ಹಲವು ಮೂಲ ಸಂಶ್ಲೇಷಣ ಕ್ರಿಯೆಗಳು ನಡೆದು ತರುವಾಯ, ಈ ಕ್ರಿಯೆಗಳನ್ನು ಆಧರಿಸಿರುವ ಜೀವಕೋಶ ವಿಭಜನೆ ಯಾವ ಹತೋಟಿಯೂ ಇಲ್ಲದೆ ನಡೆಯುತ್ತದೆ.
ಪ್ರಯೋಗಲಭ್ಯ ಪುರಾವೆಗಳಿಂದಲೂ ಗಂತಿಯನ್ನು ಉಂಟುಮಾಡುವ ಹಾಗೂ ಬೆಳೆಸುವ ಕ್ರಿಯೆಯ ಅಭ್ಯಾಸದಿಂದಲೂ ಏಡಿಗಂತಿಜನಕಗಳನ್ನು ಕುರಿತು ಎರಡು ಹಂತಗಳ ಕ್ರಿಯಾತಂತ್ರವನ್ನು ನಿರೂಪಿಸಬಹುದು-ಆರಂಭಿಕ, ಪ್ರೇರಕ, ಸಹಜ ಜೀವಕೋಶಗಳನ್ನು ಏಡಿಗಂತಿಕೋಶಗಳಾಗಿ ಪರಿವರ್ತಿಸವ ಗುಣ ಕೆಲವು ರಾಸಾಯನಿಕಗಳಿಗೆ ಇದೆ. ಇವು ಆರಂಭಿಕಗಳು (ಇನಿಷಿಯೇಟರ್ಸ್). ಪಾಲಿಸೈಕ್ಲಿಕ್ ಹೈಡ್ರೊಕಾರ್ಬನ್ನುಗಳು, ಅಜೋ ಏಡಿಗಂತಿಜನಕಗಳು ಮತ್ತು ಆರೋಮ್ಯಾಟಿಕ್ ಅಮೈನುಗಳು ಈ ಗುಂಪಿನ ವಿಶಿಷ್ಟ ಉದಾಹರಣೆಗಳು. ಎರಡನೆಯ ಗುಂಪಿನ ರಾಸಾಯನಿಕಗಳಿಗೆ ಏಡಿಗಂತಿಯ ಬದಲಾವಣೆಯನ್ನು ಆರಂಭಿಸಲು ಆಗುವುದಿಲ್ಲ; ಬದಲು, ಆಗಲೇ ಬದಲಾಗಿರುವ ಜೀವಕೋಶದ ಹೆಬ್ಬೆಳೆತಕ್ಕೆ ಒತ್ತಾಸೆಯನ್ನೋ ಶಕ್ತಿಯನ್ನೋ ನೀಡಿ ಅದನ್ನು ಗಂತಿಯಾಗಿ ಮಾರ್ಪಡಿಸುತ್ತವೆ. ಇವುಗಳಿಗೆ ಪ್ರೇರಕಗಳೆಂದು (ಪ್ರಮೋಟರ್ಸ್) ಹೆಸರು. ಈ ಗುಂಪಿನಲ್ಲಿ ಜಾಪಾಳದ ಎಣ್ಣೆ, ಫಿನಾಲುಗಳು, ನಾನಯಾನಿಕ್ ಶುದ್ಧಿಕಾರಕಗಳು (ನಾನಯಾನಿಕ್ ಡಿಟರ್ಜೆಂಟ್ಸ್), ಈಳೆಯ (ಸಿಟ್ರಸ್) ಎಣ್ಣೆಗಳು, ಯುಪೋಬಿಯ ಲ್ಯಾಟೀಸುಗಳು ಸೇರಿವೆ. ಆರಂಭಿಕಗಳೇ ಪ್ರೇರಕಗಳಾಗಬಹುದು; ಆದರೆ ಇದರ ವಿಲೋಮ ಅಸಾಧ್ಯ.
ಒಂದೇ ಏಡಿಗಂತಿಜನಕಕ್ಕೆ ಒಡ್ಡಿದ ಎಲ್ಲ ಜನರಲ್ಲೂ ಏಡಿಗಂತಿ ಏಕೆ ಏಳುವುದಿಲ್ಲ ಎನ್ನುವ ಸಮಸ್ಯೆಗೆ ಆರಂಭಿಕ, ಪ್ರೇರಕ ಎಂಬ ಈ ಪರಿಕಲ್ಪನೆ ಒಂದು ಪರಿಹಾರ ನೀಡಬಹುದು. ಏಡಿಗಂತಿ ಎದ್ದು ಕಾಣಿಸಿಕೊಳ್ಳುವಂತೆ ಮಾಡುವುದರಲ್ಲಿ ನಮ್ಮ ಪರಿಸರದಲ್ಲಿರುವ ಪ್ರೇರಕಕಾರಕಗಳು ಎಷ್ಟು ಮುಖ್ಯ ಎಂಬುದು ಇದರಿಂದ ಖಚಿತವಾಗುತ್ತದೆ. ಆದ್ದರಿಂದ ಏಡಿಗಂತಿ ಬರದಂತೆ ಕಾಪಾಡಿಕೊಳ್ಳಬೇಕಾದರೆ ರಾಸಾಯನಿಕ ಏಡಿಗಂತಿಜನಕಗಳೊಂದಿಗೆ (ಆರಂಭಿಕಗಳು) ಮಾತ್ರವಲ್ಲ ಪ್ರೇರಕಕಾರಕಗಳೊಡನೆ ಸಹ ಸಂಪರ್ಕ ಒದಗದಂತೆ ಎಚ್ಚರ ವಹಿಸಬೇಕು.

ಸಂಶೋಧನೆಯಿಂದ ಪ್ರಾಣಿಗಳಿಗೆ ಏಡಿಗಂತಿಜನಕಗಳಾದ ವಸ್ತುಗಳ ಪರಂಪರೆಯೇ ಬೆಳೆಯುತ್ತಿದೆ; ಇವು ಪ್ರಾಯಶ: ಮುನುಷ್ಯನಿಗೂ ಅಪಾಯಕಾರಿ. ಇವು ಸರ್ವವ್ಯಾಪಿಯಾಗಿರುವಂತೆ ಭಾಸವಾಗುತ್ತದೆ. ನಾವು ಸೇವಿಸುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ, ತಿನ್ನುವ ಆಹಾರದಲ್ಲಿ, ಸೇವಿಸುವ ಹಲವಾರು ಔಷಧಿಗಳಲ್ಲಿ ಅಂಗರಾಗದ್ರವ್ಯಗಳಲ್ಲಿ ಕಾರ್ಖಾನೆಗಳಲ್ಲಿ ವಿಪುಲವಾಗಿ ಬಳಸುವ ರಾಸಾಯನಿಕಗಳಲ್ಲಿ ಅವು ಇವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ